ಗುರುವಾರ, ಜನವರಿ 3, 2013

ಚಕ್ರವರ್ತಿಯಂತೆ ನಡೆಯಿರಿ


ಜನವರಿ ೦೩, ೨೦೧೩
ಬರ್ಲಿನ್, ಜರ್ಮನಿ

ಪ್ರಶ್ನೆ: ದೇವದೂತರಿಗೆ ರೆಕ್ಕೆಗಳು ಯಾಕಿರುತ್ತವೆ? ಅದರ ಸಂಕೇತವೇನು? ಕ್ರೈಸ್ತ ಸಂಪ್ರದಾಯದಲ್ಲಿ ದೇವದೂತರು ಯಾಕಿರುತ್ತಾರೆ ಎಂಬುದರ ಬಗ್ಗೆ ನೀವು ದಯವಿಟ್ಟು ಮಾತನಾಡುವಿರಾ?
ಶ್ರೀ ಶ್ರೀ ರವಿ ಶಂಕರ್: ಮಾನವನಿಗೆ ಹಾರಾಡಬೇಕೆಂಬ ಒಂದು ಸೆಳೆತವಿತ್ತು. ಅವನು ಆಕಾಶವನ್ನು ಆಳಲು ಬಯಸಿದ್ದನು. ಮಾನವನಿಗೆ ಭೂಮಿಯ ಮೇಲೆ ನಡೆಯಲು ಸಾಧ್ಯವಿತ್ತು, ಅವನು ಸಾಗರಕ್ಕೆ ಧುಮುಕಿ ನೀರಿನಲ್ಲಿ ಈಜಬಲ್ಲವನಾಗಿದ್ದನು. ಆದರೆ ಅವನಿಗೆ ಮಾಡಲು ಸಾಧ್ಯವಾಗದೇ ಇದ್ದುದೆಂದರೆ, ಹಾರಾಡುವುದು. ಆದುದರಿಂದ ತನಗಿಂತ ಒಂದು ಹೆಜ್ಜೆ ಮೇಲಿನವರು ಎಂದು ಅವನು ಪರಿಗಣಿಸಿದ ದೇವದೂತರಿಗೆ ಅವನು ರೆಕ್ಕೆಗಳನ್ನು ಕೊಟ್ಟನು. ಅವನಂದುಕೊಂಡನು, ದೇವದೂತರಿಗೆ ರೆಕ್ಕೆಗಳಿವೆ ಯಾಕೆಂದರೆ ಅವರು ಮಾನವನಿಗಿಂತ ಹೆಚ್ಚು ಬಲಶಾಲಿಗಳು ಮತ್ತು ಅವರು ಹಾರಾಡುತ್ತಾ ಅವರಿಗೆ ಬೇಕಾದಲ್ಲಿಗೆ ಹೋಗಬಲ್ಲವರು.
ಆದರೆ ಇವತ್ತು ನಮ್ಮಲ್ಲಿರುವ ರೀತಿಯ ವಿಮಾನಗಳನ್ನು ನೋಡಿದರೆ, ದೇವದೂತರು ಬಹಳಷ್ಟು ನಿಧಾನವಾಗಿರುವರು. ನಾವು ಅವರಿಗಿಂತ ಬಹಳಷ್ಟು ವೇಗವಾಗಿ ತಲುಪಬಲ್ಲೆವು. ದೇವದೂತರನ್ನು ನಾವು  ಹಿಂದಿಕ್ಕುವೆವು. ರೆಕ್ಕೆಗಳಿರುವ ಯಾರೇ ಆದರೂ, ಎಷ್ಟೇ ಬಲಶಾಲಿಗಳಾದರೂ ಅವರು ಒಂದು ವಿಮಾನಕ್ಕಿಂತ ಅಥವಾ ಒಂದು ಹೆಲಿಕೋಪ್ಟರಿಗಿಂತ ವೇಗವಾಗಿ ಹಾರಾಡಲು ಸಾಧ್ಯವಿಲ್ಲ.
ಆದುದರಿಂದ, ಅವರು ನಮಗಿಂತ ಹೆಚ್ಚು ಬಲಶಾಲಿಗಳೆಂಬುದು ಕೇವಲ ಒಂದು ಪರಿಕಲ್ಪನೆಯಷ್ಟೆ, ಯಾಕೆಂದರೆ ಆಗ ಮಾತ್ರ ಅವರು ನಮಗೆ ಸಹಾಯ ಮಾಡಲು ಸಾಧ್ಯ. ದೇವದೂತರೆಂದರೆ ಯಾರು ನಮಗೆ ಸಹಾಯ ಮಾಡಬಲ್ಲರೋ ಅವರು, ಯಾರು ಹೆಚ್ಚು ಬಲಶಾಲಿಗಳೋ ಅವರು, ನಮಗಿಂತ ಹೆಚ್ಚು ಸಜ್ಜುಗೊಂಡವರು.
ಒಬ್ಬ ದೇವದೂತನು ರೆಕ್ಕೆಗಳೊಂದಿಗೆ ಬಂದು ನಿಮ್ಮನ್ನು ಅವನೊಂದಿಗೆ ಕರೆದುಕೊಂಡು ಹೋಗಿ ನಿಮಗೆ ಹೂಗಳು ಮತ್ತು ಅವನ್ನೆಲ್ಲಾ ಕೊಡುವನೆಂದು ಕಲ್ಪಿಸಿಕೊಳ್ಳಬೇಡಿ.
ಹಾಗೆಯೇ, ಹಲವಾರು ಸಲ ನಾವು ನೋಡುತ್ತೇವೆ, ದೇವದೂತರನ್ನು ಮಕ್ಕಳಂತೆ ಚಿತ್ರಿಸಲಾಗುತ್ತದೆ. ಕ್ರೈಸ್ತ ಸಂಪ್ರದಾಯದಲ್ಲಿ ಅವರನ್ನು ಮಕ್ಕಳಂತೆ ಯಾಕೆ ಚಿತ್ರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಾ? ಇದು ಮುಗ್ಧತೆಯನ್ನು ತೋರಿಸಲು. ನೀವು ಮೇಲೆ ಮೇಲೆ ಹೋದಂತೆ, ನೀವು ಒಳಗೆ ಪರಿಶುದ್ಧವಾಗಿ ಮತ್ತು ಮುಗ್ಧವಾಗಿರಬೇಕು, ಕುತಂತ್ರಿಯಾಗಿ ಮತ್ತು ವಂಚಕರಾಗಿಯಲ್ಲ.
ಕುತಂತ್ರಿಯಾಗಿ ಮತ್ತು ವಂಚಕರಾಗಿರುವುದು ಯಾರು? ಯಾರಿಗೆ ಒಬ್ಬ ಚಕ್ರವರ್ತಿಯಂತೆ ನಡೆಯುವ ಸಾಮರ್ಥ್ಯವಿಲ್ಲವೋ ಅವರು. ಕಡಿಮೆ ಬಲವಿರುವ ಒಬ್ಬರು ವಿಷಯವನ್ನು ತಿರುಚಬೇಕಾಗುತ್ತದೆ ಹಾಗೂ ಕುತಂತ್ರಿಯಾಗಿ ಮತ್ತು ವಂಚಕರಾಗಿ ಇರಬೇಕಾಗುತ್ತದೆ.
ಬಹಳ ಬಲಶಾಲಿಗಳಾಗಿರುವವರೊಬ್ಬರು ಯಾಕೆ ಕುತಂತ್ರಿ ಮತ್ತು ವಂಚಕರಾಗಿರುತ್ತಾರೆ? ನೇರವಾದ ರೀತಿಯಲ್ಲಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ಮತ್ತು ಬಲ ನಿಮ್ಮಲ್ಲಿದ್ದರೆ ನೀವು ಯಾವುದನ್ನೂ ರಹಸ್ಯವಾಗಿ ಮಾಡಲಾರಿರಿ. ನೀವು ಹಾಗೆ ಮಾಡಬೇಕಾಗಿ ಬರುವುದಿಲ್ಲ.
ವಂಚನೆಯ ಕೆಲಸಗಳನ್ನು ಮಾಡುವ ಜನರೆಲ್ಲರಿಗೂ ಆತ್ಮ ವಿಶ್ವಾಸವಿರುವುದಿಲ್ಲ. ತಮ್ಮ ಇಚ್ಛೆಯ ಪ್ರಕಾರ ಕೆಲಸವನ್ನು ಸಾಧಿಸಬಲ್ಲೆವೆಂದು ಅವರು ನಂಬುವುದಿಲ್ಲ; ಅಲ್ಲಿಗೆ ತಲುಪಲು ತಾವು ವಿಷಯವನ್ನು ಸ್ವಲ್ಪ ತಿರುಚಬೇಕೆಂದು ಅವರು ಯೋಚಿಸುತ್ತಾರೆ.
ಹೀಗೆ, ದೇವದೂತರನ್ನು ರೆಕ್ಕೆಗಳಿರುವ ಮಕ್ಕಳಂತೆ ಚಿತ್ರಿಸಲಾಗುತ್ತದೆ ಯಾಕೆಂದರೆ ಅವರು ಮುಗ್ಧರು. ಎರಡು ಅಥವಾ ಮೂರು ವರ್ಷ ವಯಸ್ಸಿನ ಒಂದು ಮಗುವಿನಂತೆ ಅವರಿಗೆ ಒಂದು ದಪ್ಪ ಶರೀರವಿರುವುದಾಗಿ ಚಿತ್ರಿಸಲಾಗುತ್ತದೆ.
ನೀವು ಮೈಖೆಲ್ ಏಂಜಲೋವಿನ ಎಲ್ಲಾ ಚಿತ್ರಗಳನ್ನು ನೋಡಿದರೆ, ಹೆಚ್ಚಿನ ದೇವದೂತರು ಮಕ್ಕಳೆಂಬುದನ್ನು ನೀವು ಕಾಣುವಿರಿ. ಅದು ಕೇವಲ ಮುಗ್ಧತೆ ಮತ್ತು ಪರಿಶುದ್ಧತೆಯನ್ನು, ಹಾಗೂ ನಂತರ ಸಾಮರ್ಥ್ಯವನ್ನು - ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪ್ರತಿನಿಧೀಕರಿಸುತ್ತದೆ.
ನಿಮ್ಮೊಳಗೆ ಒಂದು ದೇವದೂತ ಇದ್ದಾನೆಯೆಂದು ನಾನು ನಿಮಗೆ ಹೇಳುತ್ತೇನೆ.
ಕ್ರೈಸ್ತ ಸಂಪ್ರದಾಯದಲ್ಲಿ, ಪ್ರತಿಯೊಬ್ಬರಿಗೂ ಒಂದು ರಕ್ಷಿಸುವ ದೇವದೂತ ಇರುತ್ತಾನೆಯೆಂದು ಹೇಳಲಾಗುತ್ತದೆ. ಅವರು ನಿಮ್ಮನ್ನು ಮಾತ್ರ ರಕ್ಷಿಸುವರೆಂದಲ್ಲ, ನೀವು ಆ ರಕ್ಷಕ ದೇವದೂತರ ಭಾಗವಾಗಿರುವಿರಿ; ನೀವು ಅದೇ ಆಗಿರುವಿರಿ! ನೀವೊಬ್ಬ ದೇವದೂತರಾಗಿರುವಿರೆಂದು ನೀವು ಕೇವಲ ತಿಳಿದುಕೊಳ್ಳಬೇಕಷ್ಟೆ. ನೀವೇನು ಮಾಡಲು ಬಯಸುವಿರೋ ಅದನ್ನು ಮಾಡುವ ಶಕ್ತಿಯು ನಿಮ್ಮಲ್ಲಿದೆ. ಇದನ್ನು ತಿಳಿಯಿರಿ ಮತ್ತು ವಿಶ್ರಾಮ ಮಾಡಿ.

ಪ್ರಶ್ನೆ: ಸುಧಾರಣೆಗೆ ಪ್ರಯತ್ನಿಸುವುದು ಮತ್ತು ನಾನೇನಾಗಿರುವೆನೋ, ನಾನೇನು ಮಾಡುತ್ತಿರುವೆನೋ ಅವುಗಳ ಬಗ್ಗೆ ತೃಪ್ತಿಯಿಂದಿರುವುದು, ಇವುಗಳ ನಡುವೆ ನಾನು ಸರಿಯಾದ ಸಂತುಲನವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸೈಕಲ್ ತುಳಿಯುವುದು ಹೇಗೆಂದು ನಿನಗೆ ಗೊತ್ತಾ? ಹಾಗೆಯೇ!
ಸಂತುಲನವಿರಬೇಕೆಂದು ನೀವು ಬಯಸುವಾಗ, ನಿಮ್ಮಲ್ಲಿ ಖಂಡಿತವಾಗಿ ಅದು ಇರುತ್ತದೆ. ಕೇವಲ, "ನಾನು ನನ್ನ ಜೀವನವನ್ನು ಸಂತುಲನದಲ್ಲಿಟ್ಟುಕೊಳ್ಳಲು ಬಯಸುತ್ತೇನೆ", ಈ ಯೋಚನೆಯಿದ್ದರೆ ಸಾಕು, ನೀವು ಅದಾಗಲೇ ಆ ದಿಕ್ಕಿನಲ್ಲಿ ಚಲಿಸುತ್ತಿರುತ್ತೀರಿ.
ಈಗ, "ನಾನದನ್ನು ಮಾಡುವುದು ಹೇಗೆ?" ಎಂಬ ಪ್ರಶ್ನೆ ಎದ್ದಾಗ, ಅದನ್ನು ನೀವು ಮಾಡಬಲ್ಲಿರಿ ಎಂದು ತಿಳಿಯಿರಿ. ನಿಮ್ಮನ್ನೇ ಕೇಳಿಕೊಳ್ಳಿ, ನಿಮ್ಮ ಪ್ರಜ್ಞೆಯು ನಿಮಗೆ ಹೇಳುವುದು. "ನಾನು ಸಂತುಲನದಲ್ಲಿಲ್ಲ, ನಾನು ಇದನ್ನು", ನಿಮ್ಮ ಪ್ರಜ್ಞೆಯು ಇದನ್ನು ಹೇಳುತ್ತದೆ. ಆಗ ನೀವು ನಿಮ್ಮ ಪ್ರಜ್ಞೆ ಹೇಳುವುದನ್ನು ಕೇಳಿಸಿಕೊಳ್ಳಿ.
ನೀವು ನಿಮ್ಮ ಕೆಲಸದ ಕಡೆಗೆ ಅತಿಯಾಗಿ ಗಮನ ನೀಡುತ್ತಿದ್ದರೆ, ಆಗ ನಿಮ್ಮ ಪ್ರಜ್ಞೆಯು ನಿಮ್ಮನ್ನು ಚುಚ್ಚುತ್ತದೆ, "ನೀನು ನಿನ್ನ ಕುಟುಂಬವನ್ನು, ನಿನ್ನ ಪತ್ನಿಯನ್ನು, ನಿನ್ನ ಮಕ್ಕಳನ್ನು, ನಿನ್ನ ಪತಿಯನ್ನು ಮರೆಯುತ್ತಿರುವೆ." ಆಗ ನೀವು ಹೇಳುವಿರಿ, "ಸರಿ ನಾನು ಅವರ ಕಡೆಗೆ ಗಮನ ನೀಡುತ್ತೇನೆ."
ನೀವು ಕುಟುಂಬದಲ್ಲಿಯೇ ಅತಿಯಾಗಿ ಮುಳುಗಿದರೆ ಮತ್ತು ಇತರ ಎಲ್ಲಾ ಕೆಲಸಗಳ ಬಗ್ಗೆ ಮರೆತರೆ, ಆಗ ನಿಮ್ಮ ಪ್ರಜ್ಞೆಯು ಚುಚ್ಚುತ್ತದೆ, "ಓ ದೇವರೇ, ನಾನು ಯಾವುದರಲ್ಲಿ ಬಿದ್ದಿದ್ದೇನೆ, ನಾನು ಯಾವುದರೊಳಗೆ ಬಿದ್ದೆ, ದಿನ ರಾತ್ರಿ ನಾನು ಕೇವಲ ಕೌಟುಂಬಿಕ ವ್ಯವಹಾರಗಳಲ್ಲಿ ಮುಳುಗಿದ್ದೇನೆ, ನಾನು ಪ್ರಪಂಚಕ್ಕೆ ಪ್ರಯೋಜನಕಾರಿಯಾಗಿಲ್ಲ, ನಾನೇನಾದರೂ ಮಾಡಬೇಕು, ನಾನು ನನ್ನ ಉದ್ದೇಶವನ್ನು ಹಿಂಬಾಲಿಸಬೇಕು, ನಾನು ನನ್ನ ಕೆಲಸಕ್ಕೆ ನ್ಯಾಯವನ್ನು ಒದಗಿಸಬೇಕು." ಮನಸ್ಸು ಚುಚ್ಚುತ್ತದೆ. ನಂತರ ನೀವು ಅದನ್ನು ಮಾಡುವಿರಿ.
ಜೀವನದಲ್ಲಿ ಸಂತುಲವನ್ನಿರಿಸುವ ಈ ಬಯಕೆ, ಆ ಯೋಚನೆಯಷ್ಟೇ ಸಾಕು. ಅದು ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ. ವಿದ್ಯುತ್ ಪ್ರವಾಹದಲ್ಲಿ ಅತಿಯಾದ ಏರಿಕೆಯುಂಟಾದಾಗಲೆಲ್ಲಾ ಫ್ಯೂಸ್ ತುಂಡಾಗುತ್ತದೆ ಮತ್ತು ಇತರ ಎಲ್ಲವನ್ನೂ ರಕ್ಷಿಸುತ್ತದೆ. ಅಂತೆಯೇ, ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ ಸ್ವಲ್ಪ ಪ್ರಮಾಣದಲ್ಲಿ ತಪ್ಪಿತಸ್ಥ ಭಾವನೆ ಇರಬೇಕು. ನೀವದನ್ನು ಸರಿಯೆಂದು ಸಾಧಿಸಬೇಡಿ, ಆದರೆ ಅಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದರೆ ಪರವಾಗಿಲ್ಲ; ಒಂದು ವಿದ್ಯುತ್ ವ್ಯವಸ್ಥೆಯಲ್ಲಿನ ಫ್ಯೂಸಿನಂತೆ. ವಿದ್ಯುತ್ ವ್ಯವಸ್ಥೆಯ ಬಗ್ಗೆ ನಿಮಗೆ ತಿಳಿದಿದೆ ಮತ್ತು ವಿದ್ಯುತ್ ಹಲಗೆಯಲ್ಲಿ ಫ್ಯೂಸ್ ಎಂದು ಕರೆಯಲ್ಪಡುವ ಒಂದು ಚಿಕ್ಕ ಪೆಟ್ಟಿಗೆಯಿರುತ್ತದೆಯೆಂಬುದು ನಿಮಗೆ ತಿಳಿದಿದೆ. ವಿದ್ಯುತ್ತಿನ ಪ್ರವಾಹದಲ್ಲಿ ಅಸಮತೋಲನವುಂಟಾದಾಗಲೆಲ್ಲಾ, ಫ್ಯೂಸ್ ಸಿಡಿಯುತ್ತದೆ ಮತ್ತು ಉಳಿದ ವಿದ್ಯುತ್ ವ್ಯವಸ್ಥೆಯನ್ನು ರಕ್ಷಿಸುತ್ತದೆ. ಅದರಂತೆಯೇ ಜೀವನದಲ್ಲಿ, ಅಲ್ಪ ಪ್ರಮಾಣದ ತಪ್ಪಿತಸ್ಥ ಭಾವನೆ ಇದ್ದರೆ ಪರವಾಗಿಲ್ಲ ಆದರೆ ಅತಿಯಾಗಿಯಲ್ಲ. ಆಹಾರದಲ್ಲಿರುವ ಉಪ್ಪಿನಂತೆ. ಉಪ್ಪು ಅಧಿಕವಾಗಿದ್ದರೆ ನಿಮಗದನ್ನು ತಿನ್ನಲು ಸಾಧ್ಯವೇ? ಇಲ್ಲ. ತಿಳಿಯಿತೇ? ಆದುದರಿಂದ ಸಂತುಲನದಲ್ಲಿರುವ ಇಚ್ಛೆಯಿರುವುದು ಒಳ್ಳೆಯದು.

ಪ್ರಶ್ನೆ: ನಾನು ಸೂಕ್ಷ್ಮವಾದವನು ಮತ್ತು ಸುಲಭವಾಗಿ ನೋಯುವವನು. ಸೂಕ್ಷ್ಮವಾಗಿರುವುದರಲ್ಲಿನ ಒಳಿತೇನು?
ಶ್ರೀ ಶ್ರೀ ರವಿ ಶಂಕರ್: ಜೀವನವು ಸೂಕ್ಷ್ಮತೆ ಮತ್ತು ವಿವೇಚನೆಗಳ ಒಂದು ಸಂಯೋಗವಾಗಿದೆ. ವಿವೇಚನೆಯು ಬುದ್ಧಿಗೆ ಸಂಬಂಧಿಸಿದುದು ಮತ್ತು ಸೂಕ್ಷ್ಮತೆಯು ಹೃದಯಕ್ಕೆ ಸಂಬಂಧಿಸಿದುದು.
ಸಾಧಾರಣವಾಗಿ ಬಹಳ ಸೂಕ್ಷ್ಮವಾಗಿರುವ ಜನರು ಕಾರಣವನ್ನು, ತರ್ಕವನ್ನು ಮರೆಯುತ್ತಾರೆ. ಅವರ ವಿವೇಚನೆಯು ಕಡಿಮೆಯಾಗುತ್ತದೆ, ಮತ್ತು ಬಹಳಷ್ಟು ವಿವೇಕವುಳ್ಳವರು, ಯಾವತ್ತೂ ತರ್ಕದ ಬಗ್ಗೆ ಮತ್ತು ವಿವೇಚನೆಯ ಬಗ್ಗೆ ಯೋಚಿಸುವವರಲ್ಲಿ ಸೂಕ್ಷ್ಮತೆಯ ಕೊರತೆಯಿರುವಂತೆ ತೋರುತ್ತದೆ. ಜೀವನವು ಇವೆರಡರ ಒಂದು ಸುಂದರವಾದ ಸಮತೋಲನವಾಗಿರಬೇಕು. ನೀವು ಸೂಕ್ಷ್ಮವಾಗಿ, ಅದೇ ಸಮಯದಲ್ಲಿ ಬಲವಾಗಿ ಇರಬೇಕು. ಸಾಧಾರಣವಾಗಿ ಸೂಕ್ಷ್ಮತೆಯು ಭಾವನಾತ್ಮಕ ಅಸ್ಥಿರತೆಗೆ ಸರಿಸಮಾನವಾದುದು. ಇದು ಅದಕ್ಕೆ ದಾರಿಮಾಡಬಾರದು.
ನಿಮ್ಮ ಸೂಕ್ಷ್ಮತೆಯು ನಿಮ್ಮನ್ನು ಭಾವನಾತ್ಮಕ ಅಸ್ಥಿರತೆಯ ಕಡೆಗೆ ಒಯ್ಯಬಾರದು. ನೀವು ಪ್ರಬಲರಾಗಿ ಮತ್ತು ಸೂಕ್ಷ್ಮವಾಗಿದ್ದರೆ, ಆಗ ನೀವು ನಿಮ್ಮ ಜೀವನವನ್ನು ಸಾಧಿಸಿದ್ದೀರಿ. ತಿಳಿಯಿತೇ?
ನೀವು ವಿವೇಕಿಗಳಾಗಿಯೂ ಸೂಕ್ಷ್ಮವಾಗಿಯೂ ಇರಬೇಕು.

ಪ್ರಶ್ನೆ: ಒಂದು ಜಿ.ಪಿ.ಎಸ್. ನಂತೆ ನೀವು ನಮಗೆ ನಮ್ಮ ಗುರಿ ಹಾಗೂ ವಿಧಿಯ ಕಡೆಗೆ ಮಾರ್ಗದರ್ಶನವನ್ನು ನೀಡುತ್ತಿರುವಿರಿ, ಆದರೆ ನಮ್ಮ ಗುರಿ ಮತ್ತು ವಿಧಿ ಯಾವುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಗುರಿ ಯಾವುದಲ್ಲವೆಂಬ ಒಂದು ಪಟ್ಟಿಯನ್ನು ನೀವು ಮಾಡಬೇಕು.
ನಿಮ್ಮ ಗುರಿ ಯಾವುದೆಂಬುದನ್ನು ಮತ್ತು ನೀವು ಮಾಡಲು ಬಯಸುವುದೇನೆಂಬುದನ್ನು ನೀವೇ ಕಂಡುಹಿಡಿಯಬೇಕೆಂದು ನಾನು ಬಯಸುತ್ತೇನೆ.
ನೀವು ತಿಳಿಯಬೇಕಾದ ಒಂದು ಸಂಗತಿಯೇನೆಂದರೆ, ನೀವು ಬಹಳ ಅದೃಷ್ಟಶಾಲಿಗಳು ಎಂಬುದು. ನೀವು ಪ್ರಪಂಚವನ್ನು ಮುನ್ನಡೆಸುವ ಒಂದು ಕಾಲದಲ್ಲಿರುವಿರಿ. ಒಂದು ಸ್ವಾರ್ಥಪರ, ಕಠಿಣವಾದ ಸಮಾಜದಿಂದ ಒಂದು ಸುಂದರವಾದ ಪ್ರಪಂಚದ ಕಡೆಗಿನ ದೊಡ್ಡ ಪರಿವರ್ತನೆಯೆಂದು ಚರಿತ್ರೆಯಲ್ಲಿ ಬರೆಯಲ್ಪಡುವ ಕಾಲದಲ್ಲಿ ನೀವಿರುವಿರಿ.

ಪ್ರಶ್ನೆ: ನಾವು ಇಲ್ಲಿ ಅನಾದಿ ಕಾಲದಿಂದಲೂ ಇರುವ ಹಳೆಯ ಆತ್ಮಗಳಾಗಿದ್ದರೆ, ಯಾವತ್ತಾದರೂ ಹೊಸ ಅನುಭವಗಳಾಗಲು ನಿಜವಾಗಿಯೂ ಸಾಧ್ಯವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಜೀವನವು ಪುರಾತನವಾದುದು ಹಾಗಿದ್ದರೂ ಹೊಸದು.
ಸೂರ್ಯ ಬಹಳ ಹಳೆಯದು. ಅದು ೧೯ ಬಿಲಿಯನ್ ವರ್ಷಗಳಷ್ಟು, ಅಥವಾ ಅದಕ್ಕಿಂತಲೂ ಹೆಚ್ಚು ಹಳೆಯದು. ಭೂಮಿಯು ೧೯ ಬಿಲಿಯನ್ ವರ್ಷಗಳಷ್ಟು ಹಳೆಯದು; ಸೂರ್ಯ ಅದಕ್ಕಿಂತಲೂ ಹೆಚ್ಚು ಹಳೆಯದಿರಬೇಕು, ಕೆಲವು ನೂರಾರು ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೆ ಇವತ್ತಿಗೂ ಕೂಡಾ, ಅದರ ಕಿರಣಗಳು ತಾಜಾ ಮತ್ತು ಹೊಸದಾಗಿವೆ, ಅಲ್ಲವೇ?!
ಆದುದರಿಂದ ಜೀವನವು ಪ್ರಾಚೀನತೆ ಮತ್ತು ಆಧುನೀಕತೆಗಳ; ಹಳತು ಮತ್ತು ಹೊಸತರ ಸಂಯೋಗವಾಗಿದೆ.
ಲಕ್ಷಾಂತರ ವರ್ಷಗಳಿಂದ ಹರಿಯುತ್ತಿರುವುದು ಅದೇ ನದಿಯಾಗಿದೆ, ಆದರೆ ನೀರು ಹೊಸತು ಮತ್ತು ತಾಜಾವಾಗಿದೆ, ಅಲ್ಲವೇ?

ಪ್ರಶ್ನೆ: ತಾವು ಆಹಾರವಿಲ್ಲದೆ ಬದುಕುವುದಾಗಿ ಕೆಲವು ಜನರು ಹೇಳುತ್ತಾರೆ ಮತ್ತು ಇದರ ಬಗ್ಗೆ ಒಂದು ಸಿನೆಮಾವಿದೆ. ಇದು ನಿಜವೇ ಮತ್ತು ನಿಮ್ಮ ಅನಿಸಿಕೆಯೇನು?
ಶ್ರೀ ಶ್ರೀ ರವಿ ಶಂಕರ್: ಆಹಾರಕ್ಕಾಗಿ ತಾನು ಕೇವಲ ಸೂರ್ಯಪ್ರಕಾಶವನ್ನು ನೋಡುವುದಾಗಿ ಹೇಳಿದ ಒಬ್ಬ ಸಜ್ಜನ ನನಗೆ ಗೊತ್ತು. ಅವನು ತಿನ್ನದೇ ಇರುವುದನ್ನು ಕರಗತ ಮಾಡಿಕೊಂಡಿದ್ದಾನೆ, ಆದರೆ ಕೆಲವೊಮ್ಮೆ ಅವನು ಒಂದು ಲೋಟ ಚಹಾದಲ್ಲಿ ಬಹಳಷ್ಟು ಸಕ್ಕರೆಯನ್ನು ಹಾಕಿ ಕುಡಿಯುತ್ತಾನೆ.
ನೋಡಿ, ಇದು ನಿಮ್ಮ ಶರೀರವನ್ನು ತರಬೇತುಗೊಳಿಸುವುದಾಗಿದೆ. ಇದು, ರಷ್ಯಾದಲ್ಲಿ ನಿಮಗೆ ಬ್ಯಾಲೆಯಲ್ಲಿ ಯಾವ ರೀತಿ ತರಬೇತಿ ನೀಡುತ್ತಾರೋ ಹಾಗೆ. ಅವರು ತಮ್ಮ ಇಡೀ ಬೆನ್ನುಹುರಿಯನ್ನು ಮತ್ತು ಇಡೀ ಶರೀರವನ್ನು ಯಾವ ರೀತಿ ಬಗ್ಗಿಸುವರೆಂದರೆ, ಅದು ರಬ್ಬರಿನಿಂದ ಮಾಡಲ್ಪಟ್ಟಿದೆಯೋ ಎಂಬಂತೆ. ರಷ್ಯನ್ ಬ್ಯಾಲೆಯಲ್ಲಿ ತಮ್ಮನ್ನು ತರಬೇತುಗೊಳಿಸಿಕೊಳ್ಳಲು ಅವರಿಗೆ ಬಹಳಷ್ಟು ದಿನಗಳು ಹಿಡಿದುವು.
ಅದೇ ರೀತಿಯಲ್ಲಿ, ಆಹಾರವಿಲ್ಲದೇ ಬದುಕಲು ನೀವು ನಿಮ್ಮ ಶರೀರವನ್ನು ತರಬೇತುಗೊಳಿಸಲು ಬಯಸಿದರೆ, ನೀವು ಹಾಗೆ ಮಾಡಬಹುದು. ಆದರೆ ನೀವದನ್ನು, ಅದನ್ನು ಮಾಡಿದ ಒಬ್ಬರ ಮಾರ್ಗದರ್ಶನದಲ್ಲಿ ಮಾಡಬೇಕು, ಮತ್ತು ಕೇವಲ ಪುಸ್ತಕಗಳನ್ನು ಓದುವುದರ ಮೂಲಕವಲ್ಲ. ಹಾಗೆ ಮಾಡಬೇಡಿ. ಅದರಲ್ಲಿ ನುರಿತವರೊಬ್ಬರು ನಿಮಗೆ ತರಬೇತಿ ನೀಡಬಲ್ಲರು, ಅದು ಬಹಳ ಕ್ರಮೇಣವಾಗಿ ನಡೆಯಬೇಕು.
ಆದರೆ ನೀನದನ್ನು ಯಾಕೆ ಮಾಡಲು ಬಯಸುವೆ, ಅದರಲ್ಲೇನಿದೆ. ಕಡಿಮೆ ತಿನ್ನು, ಅತಿಯಾಗಿ ತಿನ್ನಬೇಡ. ಹೌದು, ಕೇವಲ ಸೂರ್ಯನನ್ನು ದಿಟ್ಟಿಸುವುದರಿಂದ ತಮ್ಮ ಶಕ್ತಿಯನ್ನು ಪಡೆದುಕೊಳ್ಳುವ ಜನರಿದ್ದಾರೆ.
ಬೆಳಗಿನಲ್ಲಿ ನೀವು ದಿಟ್ಟಿಸುವಿರಿ ಯಾಕೆಂದರೆ ಎಲ್ಲವೂ ಚೈತನ್ಯವಾಗಿದೆ. ನಮ್ಮ ಕಣ್ಣುಗಳು ಬೆಳಕಿಗೆ ಸಂವೇದಿಸುತ್ತವೆ. ಅದು ಸೋಲಾರ್ ಸೆಲ್ ಗಳಂತೆ, ನಮ್ಮ ಕಣ್ಣುಗಳಲ್ಲಿ ಸೋಲಾರ್ ಸೆಲ್ ಗಳಲ್ಲಿರುವ ಅದೇ ಗುಣವಿದೆ. ಅವುಗಳು ಶಕ್ತಿಯನ್ನು ಹೀರಿಕೊಳ್ಳಬಲ್ಲವು ಮತ್ತು ಅದನ್ನು ಶರೀರಕ್ಕೆ ಸರಬರಾಜು ಮಾಡಬಲ್ಲವು. ಆದರೆ ಅದಕ್ಕೆ ಸರಿಯಾದ ತರಬೇತಿಯ ಅಗತ್ಯವಿದೆ. ಪ್ರಕೃತಿಯ ಇಚ್ಛೆ ಆ ರೀತಿಯಿರುತ್ತಿದ್ದರೆ, ಅದು ನಿಮಗೆ ಒಂದು ಬಾಯಿಯನ್ನು ಕೊಡುತ್ತಲೇ ಇರಲಿಲ್ಲ. ಬಾಯಿ ಮತ್ತು ಎಲ್ಲಾ ಜೀರ್ಣಕಾರಿ ಕಿಣ್ವಗಳು, ಪಿತ್ತಕೋಶ ಹಾಗೂ ಇವುಗಳೆಲ್ಲಾ ಕೆಲಸ ಮಾಡಬೇಕು, ಆದುದರಿಂದ ಅವುಗಳನ್ನು ಕೆಲಸ ಮಾಡಲು ಕೂಡಾ ಬಿಡಿ. ಆ ವಿಪರೀತಗಳಿಗೆ ಹೋಗಬೇಡಿ.

ಪ್ರಶ್ನೆ: ಮುಜುಗರವೆಂದರೇನು?
ಶ್ರೀ ಶ್ರೀ ರವಿ ಶಂಕರ್: ಮುಜುಗರವೆಂದರೇನೆಂದು ನಾನು ನಿನಗೆ ಹೇಳಬೇಕೇ? ನನಗೆ ಆಲಿಂಗಿಸಿಕೊಳ್ಳುವಿಕೆ (ಎಂಬ್ರೇಸ್ಮೆಂಟ್) ಬಗ್ಗೆ ಗೊತ್ತು, ಮತ್ತು ಮುಜುಗರ (ಎಂಬೆರಾಸ್ಮೆಂಟ್)ದ ಬಗ್ಗೆ ಅಲ್ಲ. ನಿನಗೆ ಮುಜುಗರವನ್ನು ಆಲಿಂಗಿಸಿಕೊಳ್ಳಲು ಸಾಧ್ಯವಾದರೆ, ಆಗ ಯಾವುದಕ್ಕೂ ನಿನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ.
ಜನರು ತಪ್ಪಿಸಿಕೊಳ್ಳಲು ಬಯಸುವ ಒಂದು ಸಂಗತಿಯೆಂದರೆ ಮುಜುಗರ.
ಮುಜುಗರವೆಂಬುದು ಟೀಕೆಯ ಒಂದು ಸೌಮ್ಯ ರೂಪವಾಗಿದೆ. ಅಹಿತಕರವನ್ನು ಅನುಭವಿಸುವುದರ ಒಂದು ಸೌಮ್ಯ ರೂಪವಾಗಿದೆ. ಆದುದರಿಂದ ಕೆಲವೊಮ್ಮೆ ನಾವು ಹಿತಕರ ವಲಯದಿಂದ ಹೊರಬರಬೇಕಾಗುತ್ತದೆ ಮತ್ತು ಆ ಸ್ವಲ್ಪ ಅಹಿತವನ್ನು ಅನುಭವಿಸಬೇಕಾಗುತ್ತದೆ. ಆಗ ನಮ್ಮಲ್ಲಿ ಸಾಮರ್ಥ್ಯಗಳು ಉದಯಿಸುತ್ತವೆ.